ಕ್ಯಾಂಡಿಟಫ್ಟ್   

ಕ್ರೂಸಿಫೆರೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ ಜಾತಿ. ಐಬೀರಿಸ್ ಇದರ ವೈಜ್ಞಾನಿಕ ನಾಮ. ಬಲುಸುಂದರವಾದ ಮತ್ತು ಗೊಂಚಲು ಗೊಂಚಲಾದ ಹೂಗಳನ್ನು ಬಿಡುವುದರಿಂದ ಇದನ್ನು ಮಡಿಗಳಲ್ಲಿಯೂ, ಕುಂಡಗಳಲ್ಲಿಯೂ ಬೆಳೆಸಲಾಗುತ್ತದೆ. ಅಲ್ಲದೆ ಹೂದಾನಿಗಳಲ್ಲಿಡುವುದಕ್ಕೂ ಹೂಗಳು ಸೊಗಸಾಗಿವೆ.
ಕ್ಯಾಂಡಿಟಫ್ಟ್ ಸುಮಾರು 6"-12" ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಮೂಲಿಕೆ ಸಸ್ಯ. ನಯವಾದ, ಕೂದಲುಗಳಿಲ್ಲದ ಕಾಂಡ. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುವ ಸರಳ ಎಲೆಗಳು, ಚೆಲುವಾದ ಕುಚ್ಚುಗಳಂತೆ ಕಾಣುವ ಛತ್ರಮಂಜರಿ ರೀತಿಯ ಹೂಗೊಂಚಲುಗಳು-ಇವು ಇದರ ಮುಖ್ಯ ಲಕ್ಷಣಗಳು. ಈ ಜಾತಿಯಲ್ಲಿ ಸುಮಾರು 30-40 ಪ್ರಭೇದಗಳಿವೆ. ದಕ್ಷಿಣ ಯೂರೋಪು, ಪಶ್ಚಿಮ ಏಷ್ಯ ಮತ್ತು ಉತ್ತರ ಆಫ್ರಿಕಗಳ ಮೂಲವಾಸಿಗಳಾದ ಇವನ್ನು ಸುಂದರವಾದ ಹೂಗಳಿಗಾಗಿ ಬೇರೆ ದೇಶಗಳಲ್ಲೂ ಬೆಳೆಸಲಾಗುತ್ತದೆ. ಅಲಂಕಾರದ ದೃಷ್ಟಿಯಿಂದ ಅತಿ ಹೆಚ್ಚು ಪ್ರಮುಖತೆ ಪಡೆದಿರುವ ಪ್ರಭೇದಗಳನ್ನು ಮಾತ್ರ ಮುಂದೆ ಹೆಸರಿಸಲಾಗಿದೆ: 1.ಐ.ಅಮಾರ-ಬಿಳಿ ಹೂವಿನ ಬಗೆ. 2.ಐ.ಅಂಬೆಲೇಟ-ಊದಾ ಬಣ್ಣದ ಹೂ ಬಿಡುವಂಥದು. 3.ಐ.ಓಡೊರೇಟ-ಬಿಳಿ ಹೂ ಬಿಡುವಂಥದು. ಅಲ್ಲದೆ ಹೂಗಳಿಗೆ ನವುರಾದ ಸುವಾಸನೆಯಿದೆ.

ಕ್ಯಾಂಡಿಟಫ್ಟಿನ ಎಲ್ಲ ಪ್ರಭೇದಗಳೂ ಎಂಥ ಬಗೆಯ ತೋಟದ ಮಣ್ಣಿನಲ್ಲಾದರೂ ಬೆಳೆಯಬಲ್ಲವು. ಗಾಳಿ, ಬೆಳಕು ಚೆನ್ನಾಗಿರಬೇಕು ಅಷ್ಟೆ. ಹೆಚ್ಚು ಆರೈಕೆ ಮಾಡಬೇಕಿಲ್ಲ. ಆದ್ದರಿಂದ ಇವುಗಳ ವೃದ್ಧಿ ಬಹಳ ಸುಲಭ ಎನಿಸಿದೆ. ವೃದ್ಧಿ ಬೀಜದ ಮೂಲಕವೇ. ಬೀಜಗಳನ್ನು ನೇರವಾಗಿ ಮಡಿಗಳಲ್ಲಿ ಇಲ್ಲವೆ ಕುಂಡಗಳಲ್ಲಿ ಬಿತ್ತಿ ಸಸಿಗಳನ್ನು ಪಡೆದು, ಅವು ಸಾಕಷ್ಟು ದೊಡ್ಡದಾದ ಮೇಲೆ 6"-9" ಅಂತರಕ್ಕೊಂದರಂತೆ ಸಸಿಗಳನ್ನು ಬಿಟ್ಟು ಉಳಿದವನ್ನು ಕಿತ್ತುಹಾಕಬೇಕು. ಇದರಿಂದ ಗಿಡಗಳು ಸಾಕಷ್ಟು ಹರಡಿಕೊಂಡು ಹೂಬಿಡಲು ಅನುಕೂಲವಾಗುತ್ತದೆ. 25, 30 ಮತ್ತು 35ನೆಯ ದಿವಸಗಳಲ್ಲಿ ಹಿಂಡಿಗೊಬ್ಬರದ ದ್ರಾವಣ ಹಾಕಬೇಕು. ಬೀಜ ಬಿತ್ತಿದ ಸುಮಾರು 3 ತಿಂಗಳ ಅನಂತರ ಗಿಡಗಳು  ಹೂ ಬಿಡಲು ಆರಂಭಿಸುತ್ತವೆ. 						(ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ